ಈ ಕಾದಂಬರಿಯ ಹುಳುನ ನನ್ನ ತಲೆಯಲ್ಲಿ ಬಿಟ್ಟವರು ಐ ಪಿ ಎಸ್ ಅಧಿಕಾರಿ ಶಂಕರ ಬಿದರಿಯವರು. ಅವರು ಬಳ್ಳಾರೀಲಿ ಭೀಮ್ಲಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್‌ಕೌಂಟರ್ ಮಾಡಿದ್ದು ೧೯೯೦. ಸೆಪ್ಟೆಂಬರ್ ಮಾಹೆಯಲ್ಲಿ ನೀವು ಈ ಎನ್‌ಕೌಂಟರ್ ಕುರಿತು ನಾವಲ್ ಬರೀರಿ ಅಂದರು. ನಟೋರಿಯಸ್ ಕ್ರಿಮಿನಲ್ ಭೀಮ್ಲಾನ ಬದುಕಿನ ವಕ್ರರೇಖೆಗಳಲ್ಲಿ ಗೋಚರಿಸಿದ ಹಾದಿಗಳಲ್ಲಿ ದಣಿವರಿಯದೆ ಸಹಸ್ರಾರು ಕಿಮೀ ಸಂಚರಿಸಿದೆ. ಅವೆಲ್ಲ ಅವರೆಲ್ಲ ಇದ್ದದ್ದು ನಲ್ಲಮಲ ದಂಡಕಾರಣ್ಯದ ಸೆರಗಲ್ಲಿ. ಅಲ್ಲಿ ರ್ಯಾಡಿಕಲ್ಸು, ನಕ್ಸಲೈಟ್  ಹೆಸರಿನ ಕ್ರುದ್ಧರಿದ್ದರು. ಅಲ್ಲಲ್ಲಿ ನಮ್ಮನ್ನು ಅಟಕಾಯಿಸಿದರು, ತಮ್ಮ ಪ್ರಶ್ನೆಗಳಿಂದ ಗೊಂದಲಗೊಳಿಸಿದರು, ಪೊಲೀಸರು ಎಂದು ಸಂದೇಹಿಸಿದರು. ಅವರ ಬಳಿ ಮಾರಕಾಯುಧಗಳಿದ್ದವು, ನಮ್ಮ ಬಳಿ ಸಜ್ಜನಿಕೆ ಮುಗುಳ್ನಗೆ ಇತ್ತು. ತಮ್ಮೆದೆಯೊಳಗಿನ ನೆನಪುಗಳನ್ನು ಬೆದಕಿ ಘಾಸಿಗೊಂಡರು. ಕೇಳುವುದನ್ನು ಕೇಳಿದರು, ಹೇಳುವುದನ್ನು ಹೇಳಿದರು, ದು:ಖಿಸಿದರು. ತಮ್ಮ ಭೀಮ್ಲಾನಿಗೆ ಸಾವಿಲ್ಲ ಎಂದರು. ಎನ್‌ಕೌಂಟರ್ ನಾಯಕ ಕ್ರಿಮಿನಲ್ ಕೃತ್ಯಗಳನ್ನು ಮೈಮೇಲೆ ಎಳೆದುಕೊಂಡ ಚಂಡಮಾರುತದಂತೆ ಸುಳಿದಾಡಿದ, ನಿರ್ದಯಿ ಕೃತ್ಯಗಳಿಂದ ಅಧಿಕಾರಿಗಳ ಧನಿಕರ ನಿದ್ದೆಗೆಡಿಸಿದ. ಎನ್‌ಕೌಂಟರ್ ಆಗಲೆಂದೆ ಹುಟ್ಟಿದ, ಎನ್‌ಕೌಂಟರ್ ನಲ್ಲಿ ಸಾಯಲು ನಿಶ್ಚಯಿಸಿದ. ಕೊನೆಗೆ ಹಾಗೇ ಸತ್ತ. ಮೇರಾವತ್ ಭೀಮಾನಾಯಕ್!,ಕೆಡಕುತನದ ನಂಜು ಅವನ ದೇಹದ ತುಂಬೆಲ್ಲ ವ್ಯಾಪಿಸಿತ್ತು. ಅವನ ಮನಸ್ಸನ್ನು ಪ್ರಳಯಾಂತಕಾರಿಯಾಗಿಸಿತ್ತು. ಆದರೂ ಅವನಲ್ಲಿ ಎಳ್ಳುಗಾತ್ರದಷ್ಟು ಒಳ್ಳೆಯತನವಿತ್ತು. ಒಳ್ಳೆತನದ ಪ್ರತಿಬಿಂಬ ಈ ಕೃತಿ, ಈ ಬಯೋಪಿಕ್ಕು- ಕುಂವೀ. 

ಕುಂ.ವೀರಭದ್ರಪ್ಪ

16 other products in the same category:

Product added to compare.