'ಸಾಕು ತಂದೆ ರೂಮಿ' ಪದಾಡಂಬರವಿಲ್ಲದ, ಶಾಬ್ದಿಕ ಸರ್ಕಸ್ಸು ಮಾಡದ ಹೃದಯವಂತ ಮನಸ್ಸೊಂದನ್ನ ಹೃದಯದ ಚಲುವಿನಿಂದಲೇ ಕಾಣಿಸುವ, ಕಾವ್ಯದ ಜೀವ ರಕ್ತದಿಂದ ಗಾಢವಾಗಿ ತಾಕುವ ಒಂದು ಅಪರೂಪದ ಕಲಾಕೃತಿ. ಇದನ್ನ ಈ ಕಾಲದ ಕ್ಲಾಸಿಕ್ ಎಂದು ನಾನು ಹೇಳಬಹುದಾದರೂ ಆ ನಿರ್ಣಯವನ್ನ ಲೋಕಕ್ಕೆ ಮತ್ತು ಕಾಲಕ್ಕೇ ಬಿಟ್ಟು ಬಿಡುವುದೊಳಿತು. ಕನ್ನಡದ ಮನಸ್ಸು ಒಂದು ಕೃತಿಯ ಮೌಲ್ಯಗಟ್ಟುವಿಕೆಯಲ್ಲಿ ಯಾವತ್ತಿಗೂ ಪ್ರಾಮಾಣಿಕವಾಗಿದೆ ಎಂಬುದು ನನ್ನಂಥ ಬಹುತೇಕರ ಅನುಭವ ಮತ್ತು ನಂಬಿಕೆ.
'ಸಾಕು ತಂದೆ ರೂಮಿ' ಯಲ್ಲಿ ಸಕಲ ಜೀವಪ್ರವಾಹದ ಜೇವಂತಿಕೆಯಿದೆ. ಇಲ್ಲಿ ಪಾತ್ರಗಳು ಮಾತ್ರ ಜೀವಿಸುತ್ತಿಲ್ಲ, ಕಾಲವೇ ತುಂಬುಜೀವಂತಿಕೆಯಿಂದ ಜೀವಿಸುತ್ತಿದೆ. ಕಾಲವೆಂಬ ತುಂಬುಹೊಳೆಯಲ್ಲಿ ತೇಲಿ ಹೊರಟ ನೈದಿಲೆಗಳಂತೆ ಇಲ್ಲಿನ ಪಾತ್ರಗಳಿವೆ. ಹೃದಯದ ಕಣ್ಣು ತೆರೆದಷ್ಟೂ ಚಲುವು ಇಲ್ಲಿ ದಕ್ಕಲು ಸಾಧ್ಯವಿದೆ, ಸಾಧ್ಯಮಾಡಿಕೊಂಡವರಿಗೆ. ಇಂದಿನ ರಂಗಕೃತಿಗಳ ಬಹಳ ದೊಡ್ಡ ಶಕ್ತಿ ಮತ್ತು ಮಿತಿ ಮಾತು. ಮಾತಿನ ಮಂಟಪಗಳಲ್ಲ ಮಾತಿನ ಪರ್ವತಗಳೇ ಇಂದು ರಂಗಮಂದಿರ ತುಂಬುತ್ತಿವೆ. ಪ್ರೇಕ್ಷಕ ಈ ಶಬ್ದಯುದ್ಧದ ಬಲಿಪಶು. ನಟರಾಜ ಹುಳಿಯಾರರು ಹೇಳುವಂತೆ 'ಇಡಿಯಾದ ಒಂದು ಸಂಕಲನದಲ್ಲಿ ಕಣ್ಮನ ಸೆಳೆಯುವ ಒಂದು ರೂಪಕ, ಸಾಲು ಸಿಕ್ಕರೂ ಅದು ಉತ್ತಮ ಸಂಕಲನ' (ಇದೇ ಭಾವದಲ್ಲಿ ಅವರು ಹೇಳಿದ್ದಾರೆ, ನನಗೆ ದಕ್ಕಿದಂತೆ ನಾನಿಲ್ಲಿ ದಾಖಲಿಸಿರುವೆ). ಹಾಗೆ ಇಂದಿನ ನಾಟಕಗಳಲ್ಲಿ ಗಂಟೆಗಟ್ಟಲೆ ಕೂತು ವ್ಯವಧಾನದಿಂದ ಕಾದರೂ ಒಂದು ಎದೆತಾಕುವ ಮಾತಿಗೆ ಹಂಬಲಿಸಿದರೂ ಸಿಕ್ಕದೆ ಹೋಗಿದ್ದೇ ಬಹಳಷ್ಟು ಸಾರಿ ಸತ್ಯ ಆದರೆ ಈ ಕೃತಿ ಅದಕ್ಕೆ ಅಪವಾದದಂತಿದೆ.