"ಕನ್ನಡಕ್ಕೆ ವಿಶಿಷ್ಟ ಕಾದಂಬರಿಗಳನ್ನು ನೀಡುತ್ತಿರುವ ಬಿ.ಜನಾರ್ಧನ ಭಟ್ ಅವರ ಏಳನೆಯ ಕಾದಂಬರಿ 'ಗಮ್ಯ'.ಮನುಷ್ಯ ಸಹಜವಾದ ಜೀವನಪ್ರೀತಿಯನ್ನು ನೀಡುವ ಸುಂದರ ಕಾದಂಬರಿಯಿದು.ಮಲಯಾಳಂ,ಕನ್ನಡ ಮತ್ತು ತುಳು ಈ ಮೂರೂ ಸಂಸ್ಕೃತಿಯ ವಿವಿಧ ಆಯಾಮಗಳನ್ನು ಹೊಂದಿದ ಪಾತ್ರಗಳು ಓದುಗರನ್ನು ಆಕರ್ಷಿಸುತ್ತವೆ.ಹಳ್ಳಿಯಲ್ಲಿ ಅಧ್ಯಾಪಕನಾಗಿರುವ ರಾಜೇಶ್ ನಂತಹ ಪ್ರತಿಭಾವಂತ ಸುಂದರ ತರುಣ,ರಾಗಿಣಿಯಂತಹ ಆಧುನಿಕ ಬದುಕನ್ನು ಇಷ್ಟಪಟ್ಟ ಯುವತಿ,ಸಾಂಪ್ರದಾಯಿಕ ಚೌಕಟ್ಟಿನ ನಡುವೆ ಇದ್ದುಕೊಂಡೂ ಕೊನೆಯಲ್ಲಿ ಕಥೆಗೊಂದು ಸುಂದರ ಅಂತ್ಯವನ್ನು ನೀಡುವ ಕಲ್ಯಾಣಿ-ಈ ಮೂರು ಪ್ರಧಾನ ಪಾತ್ರಗಳು ಕಾದಂಬರಿಯನ್ನು ಹಿಡಿತದಲ್ಲಿಟ್ಟುಕೊಂಡು ಕಾಲಕ್ಕೆ ಸಂದು ಹೋಗುವ ಸಮಾಜವನ್ನು ಹೊಸದಾಗಿಸಿಕೊಳ್ಳುತ್ತಾ ಹೋಗುತ್ತದೆ.ವರ್ತಮಾನದಿಂದ ಆಚೆಗೆ ನೋಡುವ ಮನುಷ್ಯ ಸಹಜವಾದ ಪ್ರೀತಿ ಮತ್ತು ದೌರ್ಬಲ್ಯ ಎರಡನ್ನೂ ಇಲ್ಲಿ ಕಾಣಬಹುದು.

  ಮನುಷ್ಯರ ಪ್ರೀತಿ,ಅಸಹನೆ,ಹೃದಯವಂತಿಕೆ,ಸಣ್ಣತನ,ಕಾಲದ ಕುಟಿಲ ಗತಿ ತಂದೊಡ್ಡುವ ವೈಪರೀತ್ಯಗಳು,ಸಾಮಾಜಿಕ ಅನ್ಯಾಯಗಳ ಬಹುಮುಖಗಳ ವಿದ್ಯಮಾನಗಳನ್ನು ನಾಯಕ ರಾಜೇಶ್ ದಾಟಿಹೋಗುತ್ತಾನೆ.ಪ್ರೀತಿ, ಪ್ರೇಮ, ವಿಷಾದ,ಈರ್ಷ್ಯೆ,ವಂಚನೆ .....ಇತ್ಯಾದಿಯಲ್ಲಿ ಬದುಕುವವರ ಕತೆಗಳು ಇಲ್ಲಿವೆ.ಸುಳ್ಳು ಹೇಳುವುದೇ ಬದುಕು ಎನ್ನುವ ಮಣಿಕಾಂತ,ನಾಟಕ ರಂಗದ ಜಗ್ಗಿ,ಕ್ಯಾಂಟೀನ್ ನಡೆಸುವ ಅಚ್ಯುತನ್,ಯಾದವಣ್ಣನ ಶರಾಬು ಅಂಗಡಿ,ಕುಡುಕರು,ಕೋಳಿ ಅಂಕ,ಜೂಜು....ಹೀಗೆ ಒಂದು ಊರಿನ ಬದುಕನ್ನು ಅದ್ಭುತವಾಗಿ ಕಟ್ಟಿಕೊಡುವುದರ ಜೊತೆಗೆ,ಅವೆಲ್ಲವನ್ನೂ ಮೀರಿ,ಮನುಷ್ಯನ ಮಗುವಿಕೆಯತ್ತ,ಅಂತರಂಗ ಸೌಂದರ್ಯದತ್ತ ಗಮನ ಹರಿಸಿರುವ ಕಾದಂಬರಿ 'ಗಮ್ಯ'.

                                                                                                                                                                                                      -ಶ್ರೀನಿವಾಸ ಜೋಕಟ್ಟೆ 

ಬಿ. ಜನಾರ್ದನ ಭಟ್

16 other products in the same category:

Product added to compare.