ಬರೆಯುವ ಸುಖಕ್ಕಾಗಿ ಹಾಗೂ ಬರವಣಿಗೆ ತಂದುಕೊಡುವ ಕೀರ್ತಿಗಾಗಿ ಬರೆಯುವವರೇ ಹೆಚ್ಚಾಗಿರುವ ಸಂದರ್ಭದಲ್ಲಿ,ಕೆಲವು ಲೇಖಕರು ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಜ್ಞಾಪೂರ್ವಕವಾಗಿ ಬರವಣಿಗೆ ಮಾಡುವುದಿದೆ. ತನಗೆ ಏನೆಲ್ಲವನ್ನೂ ಕೊಟ್ಟ ಸಾಹಿತ್ಯ ಹಾಗೂ ಸಮಾಜಕ್ಕೆ ಕೃತಜ್ಞತೆ ಸಲ್ಲಿಸುವ ಕರ್ತವ್ಯ ರೂಪದ ಬರವಣಿಗೆ ಅದು. ಅಂಥ ಬದ್ಧತೆ ಹಾಗೂ ವಿಮರ್ಶಾ ವಿವೇಕದ ರೂಪದಲ್ಲಿ ನೋಡಬಹುದಾದ ಈ ಕೃತಿಯಲ್ಲಿ, ಇತಿಹಾಸದ ಪುಟಗಳ ದೂಳು ಹೊಡೆದು, ಮಸುಕಾದ ಚಿತ್ರಗಳನ್ನು ವರ್ತಮಾನದ ತಲೆಮಾರಿಗೆ ತೋರಿಸುವ ಹಂಬಲವೂ ಇದೆ. ಭಕ್ತಿ ಸೃಜಲಶೀಲವಾಗಿದ್ದಾಗ ಹೊಂದುವ ಮಾನವೀಯ ಸ್ವರೂಪವನ್ನು ಈ ಪುಟ್ಟ ಪುಸ್ತಕ ಬಹು ಸೊಗಸಾಗಿ ಸಮರ್ಥವಾಗಿ ಸಹೃದಯರ ಗಮನಕ್ಕೆ ತರುತ್ತಿದೆ.ಗಾತ್ರ ಹಾಗೂ ವಿದ್ವತ್ತಿನ ದೃಷ್ಟಿಯಿಂದ ಈ ಬರವಣಿಗೆ ಸಿ.ಎನ್. ರಾಮಚಂದ್ರನ್ ಅವರ ಕೃತಿಶ್ರೇಣಿಯಲ್ಲಿ ಪ್ರತ್ಯೇಕವಾಗಿ ನಿಲ್ಲಬಹುದು.ಆದರೆ, ಲೇಖಕನೊಬ್ಬನಿಗೆ ತನ್ನ ಬರವಣಿಗೆ ಸಾರ್ಥಕವೆನ್ನಿಸುವ ಆತ್ಮತೃಪ್ತಿ ಉಂಟುಮಾಡುವ ಗುಣ ಈ ಕೃತಿಗಿದೆ. ಈ ದೇಶದ ಸಾಮರಸ್ಯದ ನೆಲೆಗಳನ್ನು ನೆನಪಿಸುವ ವಿವೇಕ ಕೃತಿಯ ಹೊಳಪನ್ನು ಹೆಚ್ಚಿಸಿದೆ. ಇತಿಹಾಸದ ಒಂದು ಮಗ್ಗುಲನ್ನಷ್ಟೇ ಮುನ್ನೆಲೆಗೆ ತರುವ ಅಪಾಯಗಳ ಬಗ್ಗೆ ಗಮನ ಸೆಳೆಯುವ ಈ ಬರವಣಿಗೆ, ಪ್ರಜ್ಞಾಪೂರ್ವಕವಾಗಿ ಹಿನ್ನೆಲೆಗೆ ಸರಿಸಿದ ಅಧ್ಯಾಯಗಳ ಮಹತ್ವವನ್ನು ಮನಗಾಣಿಸುವಂತಿದೆ. ಕೃಷ್ಣಭಕ್ತಿಯ ಮುಸ್ಲಿಂ ಕವಿಗಳ ಬದುಕು-ಸಾಧನೆಯನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಇಲ್ಲಿನ ಬರಹಗಳು,ಸೇಡು ಮತ್ತು ಕೇಡಿನಿಂದ ನಮ್ಮನ್ನು ಬಿಡುಗಡೆಗೊಳಿಸುವ ಜೀವಶಕ್ತಿ ಹೊಂದಿವೆ. ಅದೇಕಾಲಕ್ಕೆ,ಭಾರತದ ಮಣ್ಣು ರೂಪಿಸಿದ ಅಪೂರ್ವ ವ್ಯಕ್ತಿಗಳಿಗೆ ವರ್ತಮಾನ ತೊಡಿಸಿರುವ ಚೌಕಟ್ಟುಗಳನ್ನು ದೂರ ಮಾಡುವ ಹಂಬಲವನ್ನೂ ಹೊಂದಿವೆ. ಎಂಬತ್ತೇಳರ ವಯಸ್ಸಿನಲ್ಲಿ ಬಹುತ್ವ ಭಾರತದ ಅನನ್ಯತೆಯನ್ನು ನೆನಪಿಸುವ ಬಹು ಅಗತ್ಯದ ಹೊಣೆಗಾರಿಕೆಯನ್ನು ಸಿಯೆನ್ನಾರ್ ನಿರ್ವಹಿಸಿದ್ದಾರೆ. ಸಹೃದಯರ  ಕೃತಜ್ಞತೆ ಮತ್ತು ಮೆಚ್ಚುಗೆಗೆ ಈ ಕೃತಿ ಅರ್ಹವಾದುದು.

                                                                                                                                                                                                         -ರಘುನಾಥ ಚ ಹ  

ಡಾ. ಸಿ.ಎನ್. ರಾಮಚಂದ್ರನ್

16 other products in the same category:

Product added to compare.