ಕಾಡುವ ಕಥೆ ಥಟ್ಟನೆ ಬರೆಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ.ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮಚಂದ್, ಅಲೆಕ್ಸಾಂಡರ್ ಪುಷ್ಕಿನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ. ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಸುವುದಿಲ್ಲ. ಓಡಾಡುತ್ತವೆ. ಕಾಡುತ್ತವೆ. ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ ಹುಟ್ಟಿಸುತ್ತವೆ. ಎಲ್ಲ ತಿಳಿದೂ ಈ ತಿಳುವಳಿಕೆಯನ್ನು ತೆಗೆದುಕೊಂಡು ಏನು ಮಾಡುವುದು ಎನ್ನುವ ಹತಾಶೆಯ ಮುಂದೆ ನಮ್ಮನ್ನು ನಿಲ್ಲಿಸುತ್ತವೆ. ಬಹುತೇಕ ಈ ಕಾದಂಬರಿಯ ಕಥಾವಸ್ತು ಹಾಗೆಯೇ. ಇಲ್ಲಿ ಪಾತ್ರಗಳು ನೆಪ ಮಾತ್ರ, ಸಂಬಂಧಗಳ ತಾತ್ವಿಕತೆಯೇ ಕಾದಂಬರಿ ನಮಗೆ ಒಡ್ಡುವ ಪ್ರಶ್ನೆ. ಕಾದಂಬರಿಕಾರ್ತಿ ಸುಶೀಲ ಡೋಣೂರ ಕಣ್ಣಿಗೆ ಕಂಡರೂ ಎಂಬ ಮಾತ್ರಕ್ಕೆ ಮನುಷ್ಯರನ್ನು ನೋಡಿಲ್ಲ. ಬದಲಾಗಿ ಓದುವ ಗಂಭೀರ ಯತ್ನವನ್ನು ಮಾಡಿದ್ದಾರೆ. ನಮ್ಮ ಸಂದರ್ಭದ ಅತಿ ದೊಡ್ಡ ದುರಂತದ ಮುನ್ನುಡಿಯ ಸಾಲುಗಳನ್ನಷ್ಟೇ ಅವರು ಇಲ್ಲಿ ಇಟ್ಟಿರುವುದು. ಕಾದಂಬರಿ ಇನ್ನೂ ಬರಬೇಕಾಕಿದೆ. ಆಗ ಅದು ಮತ್ತೊಂದು ರಿಸರಕ್ಷನ್ ಆಗಲು ಸಾಧ್ಯವಿದೆ. 'ಬದುಕೆನ್ನುವ ವಿಕಾರದ ಅರ್ಥವನ್ನು ಹುಡುಕುತ್ತಾ ಹೋದಷ್ಟು ಅದು ಬದಲಾಗುತ್ತಾ ಹೋಗುತ್ತದೆ. ಅದು ಒಂದು ರೀತಿ ಕೈಯೊಳಗೆ ಸಿಕ್ಕೂ ಹಾರಿ ಹೋಗುವ ಚಿಟ್ಟೆಯಂತೆ' ಇವು ಬೇರುಗಡಿತವಾಗಿ ಬದುಕುವ ನಗರದ ಮನಸ್ಸಿನಲ್ಲಿ ನಿತ್ಯ ಸಾವಿರ ಬಾರಿ ಹುಟ್ಟಿ ಸಾಯುವ ಸಹಾಯವಿಲ್ಲದ ವಾಸ್ತವದ ಸಾಲುಗಳು. ಕಾದಂಬರಿಯ ವಸ್ತು ಹೊಸದು, ಅಷ್ಟೇ ಸಂಕಟದ ಭಾಷೆ, ಕುತೂಹಲ ಕೆರಳಿಸುವ ಅಭಿವ್ಯಕ್ತಿ, ಈ ಕಾರಣ ಲೇಖಕಿಯನ್ನು ಅಭಿನಂದಿಸದೆ ಇರಲಾಗದು.                          

                                                                                                                                                                                                        - ರಾಗಂ

ಸುಶೀಲಾ ಡೋಣೂರ

16 other products in the same category:

Product added to compare.