ಪ್ರೇಮಕುಮಾರ್  ಹರಿಯಬ್ಬೆ ಪತ್ರಕರ್ತರಾಗಿ ನನಗೆ ಮುಖಾಮುಖಿಯಾಗಿದ್ದು ಬಹಳ ತಡವಾಗಿ. ಚಿತ್ರೋತ್ಸವಗಳಲ್ಲಿ ಭೇಟಿಯಾಗಿ ಸಿನಿಮಾಗಳ ಬಗ್ಗೆ ಚರ್ಚಿಸಿದ್ದೆವು. ಅವರ ಒಂದು ಕಥಾ ಸಂಕಲನವೂ ಓದಿಗೆ ಸಿಕ್ಕು ಅವರ ಕಥನದ ಜಾಡು ಕಂಡುಕೊಳ್ಳಲು ನೆರವಾಯಿತು. ಕಥೆಗಳು ಮನಸ್ಸಿನಾಳಕ್ಕೆ ಇಳಿವ ಬಗೆಯೂ ಬೇರೆಯೇ ರೀತಿ. ಯಾವುದೋ ಕೆಲಸದಲ್ಲಿರುವಾಗ, ಎಲ್ಲಿಯೋ ಸದ್ದುಗದ್ದಲದ ನಡುವೆ ಇರುವಾಗ ಕೂಡಾ ಯಾವುದೋ ಪಾತ್ರ, ಅದು ಎದುರಿಸಿದ ಸನ್ನಿವೇಶ ಸುಳಿದು ಹೋಗುತ್ತದೆ. ಎಲ್ಲಿಯದಿದು ಎಂದು ಅದರ ಜಾಡು ಹಿಡಿಯಲು ಹೊರಟರೆ ನಿಲ್ಲುವುದು ಹರಿಯಬ್ಬೆಯವರ ಕಥೆಯೊಂದರ ನಡುವೆ! ಮೊದಲ ಓದಿನಲ್ಲಿ ಸಾಮಾನ್ಯ, ಸಹಜ ಎಂದುಕೊಂಡದ್ದು ಯಾವಾಗಲೋ ಮನಸ್ಸಿನಾಳಕ್ಕೆ ಇಳಿದು ಮತ್ತೆ ಮತ್ತೆ ಚಿತ್ರದಂತೆ ಮೂಡುತ್ತದೆ. ಇದು ನನ್ನ ಅನುಭವ!!

ಈಗ ಅವರ ಇತ್ತೀಚಿನ ಕಥೆಗಳು ಪುಸ್ತಕ ರೂಪದಲ್ಲಿ ಹೊರಬಂದಿವೆ.ಸಾಮಾನ್ಯರ ಬದುಕು, ಕಷ್ಟಗಳು, ಗ್ರಾಮೀಣ ಪರಿಸರಗಳನ್ನು ಈ ಕಥೆಗಳು ಕಟ್ಟಿಕೊಡುತ್ತವೆ. ಗ್ರಾಮೀಣ ಜನರು ಘನತೆವೆತ್ತ ಬದುಕು ಕಟ್ಟಿಕೊಳ್ಳುವಾಗ ತೊಡಕಾಗುವ ರಾಜಕೀಯ ಹುನ್ನಾರಗಳನ್ನು ಬಯಲಾಗಿಸುತ್ತವೆ. ಕಥೆಗಳಲ್ಲಿ ಕೆಂಡದಂಥ ವಾಸ್ತವಗಳಿವೆ. ಕರುಳಿಗೆ ತಂಪೆನಿಸುವ ವಾತ್ಸಲ್ಯವೂ ಇದೆ.

ಹರಿಯಬ್ಬೆ ಅವರ ಕಥನ ಕೌಶಲ, ವಸ್ತುವಿನ ಆಯ್ಕೆ, ಸಂಕೀರ್ಣವಾದದ್ದನ್ನೂ ಸರಳವಾಗಿ ನಿಭಾಯಿಸುವ ಬಗೆಯೇ ಒಂದು ಅಚ್ಚರಿ! ಅಬ್ಬರಿಸದೆ , ಘೋಷಿಸದೆ, ಗೊಣಗದೆ ಆಕ್ಷೇಪಿಸಲೋ ಆಪಾದಿಸಲೋ ಒಲ್ಲದ ಒಂದು ಶಾಂತ ಸಂವೇದನಾಶೀಲ ಮನಸ್ಸು ಕತೆಗಳನ್ನು ಕಟ್ಟುತ್ತದೆ. ಫಲಾಪೇಕ್ಷೆ ಇಲ್ಲದೆ ಅಪರೂಪವೆನಿಸುವ ಶುದ್ಧಮನಸ್ಸಿನ ಒಳಗಡೆ ಓಡಾಡುವ ಪಾತ್ರಗಳು, ಇಲ್ಲಿ ಮಾತನಾಡುತ್ತವೆ; ನಮ್ಮೊಳಗನ್ನು ಕಾಡುತ್ತವೆ. ಅವರಿಗೆ ಅಭಿನಂದನೆ.

                                                                                                                                                                                           ಡಾ| ವಿಜಯ.

ಪ್ರೇಮಕುಮಾರ್ ಹರಿಯಬ್ಬೆ

16 other products in the same category:

Product added to compare.