"ಸಿಹಿ ನೆನಪುಗಳೇ ಹಾಗೆ,ಅದರಲ್ಲೂ ಮರುಕಳಿಸಲಾಗದ ಗತದ ಬಗ್ಗೆ ಹಳಹಳಿಕೆ ಇಲ್ಲದೆ ಸಹಜ ಜೀವನಪ್ರೀತಿಯಿಂದ ದಾಖಲಿಸಿದಾಗ ಅದು ಸ್ಯಕ್ಕೂ ಕನ್ನಡಿಯಾಗಬಲ್ಲದು.ಕೆ.ಆರ್ ಸ್ವಾಮಿಯವರ ಈ ಲೇಖನಮಾಲೆಗೆ ಆ ಗುಣ ದಕ್ಕಿದೆ.ಅವರ ಲೇಖನ ಕೃಷಿಗೆ ಎಂತಹ ಉತ್ಕಟಕ್ಷಣದಲ್ಲೂ,ಎಂಥಾ ದುರಿತ ಸಂದರ್ಭದಲ್ಲೂ,ಒಳಸುಳಿಗಳಲ್ಲೆಲ್ಲೋ ಪ್ರಕಟವಾಗುವ ಬದುಕಲ್ಲಿನ ಅನುಭೋಗವನ್ನು ಸೆರೆಹಿಡಿಯುವ ಶಕ್ತಿ ಇದೆ.ಹಾಗಾಗಿ ಕೇವಲ ವಿಷಾದವಾಗಬಹುದಾಗಿದ್ದ ಮೂವರು ಅಜ್ಜಿಯಂದಿರ (ಬದುಕೆಂದರೆ ಹೀಗೆ) ಕಥೆಗೆ ಒಂದು ಅನುಭೂತಿ ಪ್ರಾಪ್ತವಾಗುತ್ತದೆ.

   ವ್ಯಂಗ್ಯ ಚಿತ್ರವನ್ನೇ ಕಲಾಭಿವ್ಯಕ್ತಿ ಮಾಡಿಕೊಂಡ ಕೆ.ಆರ್ ಸ್ವಾಮಿಯವರ ಬರಹ ಸಮುಚ್ಚಯದಲ್ಲಿ ವ್ಯಂಗ್ಯ ಚಿತ್ರಕಲೆಯ ವೈಶಿಷ್ಟ್ಯವಾದ ಲಘುವಿನಲ್ಲಿ ಗುರು ಕಾಣುವ,ಗುರುವಿನಲ್ಲಿ ತನಿ ಕಾಣುವ ಪರಿಯನ್ನು ಗಮನಿಸಬಹುದು.

   ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಕೆ.ಆರ್ ಸ್ವಾಮಿಯವರು ರಜೆಗೆ ನಮ್ಮ ಮನೆಯಲ್ಲಿ ಒಂದು ವಾರ ಇದ್ದು ಹೋಗುತ್ತಿದ್ದದ್ದು ವಾಡಿಕೆ.ನಮ್ಮ ತಾಯಿಗೆ ತನ್ನ ತಮ್ಮ ಬಂದ ಎಂಬ ಸಂತೋಷವಾದರೆ ನಮಗೋ,ಬೆಳಗಾಗುತ್ತಿದ್ದಂತೆಯೇ ಈಜಾಡಲು ಕೆರೆಗೋ,ಹೊಳೆಗೋ ಕರೆದುಕೊಂಡು ಹೋಗುವ,ಮನೆಗೆ ಬಂದರೆ ತರತರಹದ ಹೊಸ ಆಟಗಳನ್ನು ಹೇಳಿಕೊಡುವ,ಸಂಜೆಯಾದರೆ ಗುಡ್ಡ ಬೆಟ್ಟಕ್ಕೆ ಕರೆದೊಯ್ದು ಈ ಮರದ ಹೆಸರೇನು ಹೇಳು? ಆ ಹೂವಿನ ವೈಶಿಷ್ಟ್ಯತೆ ಗೊತ್ತಾ? ಎಂದು ಪ್ರಶ್ನಿಸುತ್ತಾ ಪ್ರಕೃತಿ, ಪರಿಸರವನ್ನು ಪರಿಚಯಿಸುವ,ರಾತ್ರಿಯಾದರೆ ಸರಿರಾತ್ರಿಯವರೆಗೂ ತಾನು ಓದಿದ ಕನ್ನಡ ಸಾಹಿತ್ಯದ ಕಥೆ,ಕಾದಂಬರಿಗಳ ಸಂಕ್ಷಿಪ್ತ ವಿವರಣೆ ಹೇಳುವ ಕೆ.ಆರ್.ಸ್ವಾಮಿ(ನಮ್ಮ ರಾಮಣ್ಣ) ಬಂದರು ಎನ್ನುವ ಸಂತೋಷ.ಆಗಿನಿಂದಲೇ ಕುಶಲ ಸಂಭಾಷಣಕಾರರಾಗಿದ್ದ ಅವರ ಮಾತಿನ ಸರಸ,ಸುಭಗ ಶೈಲಿ ವಯಸ್ಸಾದಂತೆ ಕುಂದದೇ ಅದೇ ಗುಣವನ್ನು ಕಾಪಿಟ್ಟುಕೊಂಡಿದೆ ಹಾಗೂ ಅದು ಈ ಲೇಖನಗಳಲ್ಲೂ ಅನುರಣಿಸುವುದೇ ಈ ಲೇಖನಗಳ ಪ್ರಧಾನ ಗುಣವಾಗಿದೆ.

                                                                                                                                                                                                              -ಗಿರೀಶ್ ಕಾಸರವಳ್ಳಿ .

ಕೆ.ಆರ್.ಸ್ವಾಮಿ

16 other products in the same category:

Product added to compare.