ವ್ಯಥೆಗಳೇ ಕತೆಗಳಾಗುವುದು ಅನ್ನುವುದಾದರೆ ಆಸ್ಪತ್ರೆಯೊಂದು ಕಥಾಸರಿತ್ಸಾಗರ. ಲೆಕ್ಕಾಚಾರದ ಬದುಕಿನಲ್ಲಿ ಮೈ ಮರೆತ ನಮ್ಮನ್ನು ಆಗಾಗ್ಗೆ ನಿಲ್ಲಿಸಿ ವಿಶಾಲದೃಷ್ಟಿಯನ್ನು ದಯಪಾಲಿಸಿ ಹುಷಾರಾಗಿರುವುದು ಆಸ್ಪತ್ರೆ. ಈ ಹೊಸ ನೋಟ ಅಥವಾ ಹೊಸ ಪಾಠವನ್ನು ಅದು ಕೊಡುವುದು ಕಥೆಗಳ ರೂಪದಲ್ಲಿ. ಜನರಲ್ ವಾರ್ಡಿನ ಕಬ್ಬಿಣದ ಮಂಚದ ತುದಿಗೆ ಕೂತ ಇಬ್ಬರು ಹಂಚಿಕೊಳ್ಳುವ ವಿವರಗಳೆಲ್ಲವೂ ಕತೆಗಳೇ. ಇಲ್ಲಿನ ಕತೆಗಾರ ಡಾಕ್ಟರೂ ಆಗಿರುವುದರಿಂದ ಬಹುತೇಕ ಕತೆಗಳ ಪರಿಸರ ಆಸ್ಪತ್ರೆಯೇ ಆಗಿದೆ ಮತ್ತು ಈ ಡಾಕ್ಟರು ಒಳ್ಳೆಯ ಕತೆಗಾರನೂ ಆಗಿರುವುದರಿಂದ ಇದರ ತುಂಬೆಲ್ಲ ಮುರಿದ ಮನಸ್ಸುಗಳ ಎಕ್ಸ್ರೇ ಚಿತ್ರಗಳಿವೆ. ಆಸ್ಪತ್ರೆಯೊಳಗಿನ ಔಷಧದ ವಾಸನೆ, ಕಿಟಕಿಯಿಂದ ಕಾಣುವ ರಸ್ತೆಯ ಇತರ ವಾಸನೆಗಳೊಂದಿಗೆ ಕಲೆತು ಒಂದು ವಿಚಿತ್ರ ಪರಿಮಳದ ಬೇರೆ ಜಗತ್ತನ್ನು ಈ ಕತೆಗಳಲ್ಲಿ ತೆರೆದುಕೊಂಡಿದೆ.

    ಕನ್ನಡದೂರಿನ ಚಿಕ್ಕಾಸ್ಪತ್ರೆಯಿಂದ ಅಮೇರಿಕದ ದೊಡ್ಡಾಸ್ಪತ್ರೆಯವರೆಗೂ ಹಬ್ಬಿರುವ ಈ ಜಗತ್ತು,ಹೊಸ ಕಾಲದ ಹೊಸ ಕಾಯಿಲೆಗಳನ್ನು ಪತ್ತೆ ಮಾಡಲೂ ಯತ್ನಿಸುತ್ತಿದೆ. ಕಲೆಯ ಉದ್ದೇಶವೂ ಲೋಕವನ್ನು ವಾಸಿಮಾಡುವುದೇ ಅನ್ನುವುದಾದರೆ,ಈ ಕತೆಗಳಲ್ಲಿ ಬದುಕಿನ ರುಜಿನಗಳನ್ನು ಸರಿಪಡಿಸುವ 'ಗುಣ' ಖಂಡಿತಾ ಇದೆ. ದಿನಾ ರಾತ್ರಿ ಊಟದ ನಂತರ ಒಂದೊಂದು ಕತೆ ಸೇವಿಸಿದರೆ ನಿಮ್ಮೆಲ್ಲಾ ನೋವುಗಳು ವಾಸಿಯಾಗುತ್ತವೆ ಎಂಬುದಕ್ಕೆ 'ಸೆಕೆಂಡ್ ಒಪೀನಿಯನ್ನಿನ ಅಗತ್ಯ ಖಂಡಿತ ಇಲ್ಲ!

ಗುರುಪ್ರಸಾದ ಕಾಗಿನೆಲೆ

16 other products in the same category:

Product added to compare.