ಪುಸ್ತಕ ಕುರಿತು ಕನ್ನಡದ ಪ್ರಸಿದ್ದ ಲೇಖಕ ಎಸ್ ಎಲ್ ಭೈರಪ್ಪನವರು ಹೀಗೆ ಹೇಳಿದ್ದಾರೆ- "ಲಲಿತವಾಗಿ ಚಲಿಸುವ,ಒಂದೇ ಒಂದು ಅನವಶ್ಯಕ ಪದವಿಲ್ಲದ ಭಾಷೆ ನಿಮ್ಮದು. ವಿಸ್ತಾರವಾದ ಓದಿನ ವ್ಯಾಪ್ತಿಯಿಂದ ಓದುಗರಿಗೆ ಹೊಸಹೊಸ ದೇಶ, ಸಂಸ್ಕೃತಿ, ಲೇಖಕರು ಮತ್ತು ಪುಸ್ತಕಗಳನ್ನು ಪರಿಚಯಿಸಿದ್ದೀರಿ. ಪ್ರಬಂಧವು ಸಹಜವಾಗಿಯೇ ಹಾಕುವ ಗಾತ್ರಮಿತಿಯು ನಿಮ್ಮ ಅಭಿವ್ಯಕ್ತಿಗೆ ಸಾಂದ್ರತೆಯನ್ನೂ, ತೀವ್ರತೆಯನ್ನೂ ಕೊಟ್ಟಿದೆ. ಈ ಪ್ರಬಂಧಗಳು ಕಳೆದ ಮೂರು ದಶಕಗಳ ಕನ್ನಡ ಸಾಹಿತ್ಯದ ಎಷ್ಟೋ ಒಳ ಘಟನೆಗಳ ದಾಖಲೆಯೂ ಆಗಿವೆ. ನವ್ಯಕ್ಕೆ ಸಂಬಂಧಿಸಿ ಹೆಚ್ಚು ಘಟನೆ, ವಿವರಗಳು ಬಂದಿದ್ದರೂ ಸಾಹಿತ್ಯದ ಇತರ ಧಾರೆಗಳನ್ನು ಮೆಚ್ಚುವ ಮುಕ್ತ ಮನಸ್ಸು ನಿಮ್ಮದು. ನಿಮ್ಮ ಈ ಪ್ರಬಂಧಗಳನ್ನು ತೀ. ನಂ. ಶ್ರೀ., ಮೂರ್ತಿರಾವ್, ರಾಕು ಮೊದಲಾದವರ ಜಾತಿಯ ಪ್ರಬಂಧಗಳೆನ್ನುವಂತಿಲ್ಲ. ಇವು ಲಲಿತ, ಆದರೆ ಬೋಧಪ್ರದ ಜಾತಿಯವು. ಪಾ. ವೆಂ. ಆಚಾರ್ಯರೊಬ್ಬ ಒಂಟಿ ವಿಶಿಷ್ಟ ಲೇಖಕರಾಗಿದ್ದರು, ಅವರದೊಂದು ಪರಂಪರೆ ಬೆಳೆಯಲಿಲ್ಲ ಎಂದು ಕೊರಗುತ್ತಿದ್ದ ನನಗೆ ನಿಮ್ಮ ಈ ಪುಸ್ತಕವನ್ನು ಓದಿ ತಂಪೆನಿಸಿತು". ಮರು ಮುದ್ರಣಗೊಂಡಿರುವ ಎಸ್ ದಿವಾಕರ್ ರವರ ಅತ್ಯುತ್ತಮ ಪ್ರಬಂಧಗಳ ಸಂಕಲನವಿದು.